ಎಲ್ಲರಿಗೂ ನಮಸ್ಕಾರ. ಆತ್ಮೀಯ ಸ್ನೇಹಿತರೆ.
ಶ್ರೀ ಶೋಭ ಕೃನ್ನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ‘ಯುಗಾದಿ’ ಹಿಂದೂಗಳ ಆರಂಭದ ಹೊಸ ವರ್ಷ. ಭಾರತದಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗದ ಎರಡು ಸಂಪ್ರದಾಯಗಳಲ್ಲಿ ಯುಗಾದಿಯ ಆಚರಣೆಯನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಪದ್ಧತಿ ಹೆಚ್ಚು ಜನಪ್ರಿಯವಾಗಿದ್ದು, ಕೇವಲ ದ. ಕನ್ನಡ, ಉಡುಪಿ ಹಾಗೂ ಉ. ಕನ್ನಡ ಜಿಲ್ಲೆಗಳಲ್ಲಿ ಸೌರಮಾನ ಯುಗಾದಿಯ ಆಚರಣೆ ಹೆಚ್ಚು ಜನಪ್ರಿಯವಾಗಿದೆ. ಭಾರತದ ಹಲವು ರಾಜ್ಯಗಳಲ್ಲಿ ಎರಡೂ ಯುಗಾದಿಗಳ ಆಚರಣೆಯ ಸಂಪ್ರದಾಯವನ್ನು ಕಾಣಬಹುದು.
ಚಾಂದ್ರಮಾನ ಯುಗಾದಿ ಈ ಬಾರಿ 22 ನೇ ಮಾರ್ಚ್ 2023ರ ಚೈತ್ರ ಶುಕ್ಲ ಪಾಡ್ಯಮಿಯ ಬುಧವಾರದ ದಿನ ಅರುವತ್ತು ಸಂವತ್ಸರಗಳಲ್ಲಿ ಮೂವತ್ತೇಳನೆಯ ಸಂವತ್ಸರವಾದ ಶ್ರೀ ಶೋಭ ಕೃನ್ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಆಚರಿಸಿದ್ದಾಗಿದೆ. ಹಾಗೆಯೇ ಸೌರಮಾನ ಯುಗಾದಿ ಸೂರ್ಯ ಮೇಷ ರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ 14ನೇ ಏಪ್ರಿಲ್2023 ರ ಶುಕ್ರವಾರ ಆಚರಣೆಗೆ ಬರಲಿದೆ. ‘ಯುಗಾದಿ’ ಪದ ಸಂಸ್ಕೃತದ ಶುದ್ಧರೂಪ.‘ಉಗಾದಿ’ ತದ್ಭವ ರೂಪ. ‘ಯುಗ ‘ಅಂದರೆ ‘ಸೃಷ್ಟಿಯ ಕಾಲಮಾನ’ ಅಥವಾ ‘ಅವಧಿ’ ಎಂಬ ಅರ್ಥವವನ್ನೂ ‘ಆದಿ’ ಅಂದರೆ ‘ಆರಂಭ’ ಎಂಬ ಅರ್ಥವನ್ನು ಕೊಡುತ್ತದೆ. ಹೀಗೆ ಈ ಎರಡೂ ಪದಗಳು ಸೇರಿ ‘ಯುಗಾದಿ’ಆಗಿದೆ.
ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಹಿಂದೂಗಳ ಹೊಸ ವರ್ಷವನ್ನು ಬೇರೆಬೇರೆಯ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ‘ಯುಗಾದಿ’ ಎಂಬ ಹೆಸರಿನಿಂದ ಕರೆದರೆ ಮಹಾರಾಷ್ಟ್ರದಲ್ಲಿ ‘ಗುಡಿಪಾಡ್ವಾ’ ಎಂಬ ಹೆಸರಿನಿಂದಲೂ ರಾಜಸ್ಥಾನದಲ್ಲಿ ‘ಥಾಪಾ’ ಅಥವಾ ‘ಚೇತಿಚಂದ್’ ಎಂತಲೂ, ಬಂಗಾಳದಲ್ಲಿ ‘ಪೊಯ್ಲಾ ಬೈಸಾಖಿ’ ಎಂಬ ಹೆಸರಿನಿಂದ ಕರೆದರೆ ಮಣಿಪುರದಲ್ಲಿ ‘ಸಜಿಬು ನೋಂಗ್ಮಾ ಪಾಂಡ’ ಎಂಬ ಹೆಸರಿನಿಂದ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ‘ಬೈಸಾಖಿ’ ಎಂಬ ಹೆಸರಿನಲ್ಲಿ ಅಲ್ಲಿನ ಜನ ಹೊಸ ವರ್ಷವನ್ನು ಆಚರಿಸುವುದು ಚಾಲ್ತಿಯಲ್ಲಿದೆ. ತಮಿಳು ನಾಡಿನಲ್ಲಿ ‘ಪುತಾಂಡು’ ಎಂಬುದಾಗಿಯೂ, ಕೇರಳದಲ್ಲಿ ‘ವಿಷು’ ಎಂಬ ಹೆಸರಿನಿಂದ ಹೊಸ ವರ್ಷವನ್ನು ‘ಸೌರಮಾನ ಪಂಚಾಂಗ’ ದ ಪ್ರಕಾರ ಆಚರಿಸುತ್ತಾರೆ.
ಶಿಶಿರ ಋತುವಿನ ಮಾಘ-ಫಾಲ್ಗುಣ ಮಾಸದಲ್ಲಿ ಪ್ರಕೃತಿಯ ಚಳಿಗೆ ಗಿಡ ಮರಗಳ ಎಲೆಗಳು ಉದುರಿ ಬರಿದಾಗಿ ಕಾಣುತ್ತಿದ್ದ ಮರ ಗಿಡಗಳು ವಸಂತ ಋತುವಿನ ಚೈತ್ರಮಾಸದ ಶುಕ್ಲ ಪಾಡ್ಯಮಿಯ ಯುಗಾದಿಯ ಹೊಸ ವರ್ಷದ ವೇಳೆಗೆ ಎಳೆಯ ಚಿಗುರಿನಿಂದ ಮರಗಿಡಗಳು ಚಿಗುರಿ ಹೊಸ ಕಳೆಯಿಂದ ಕೂಡಿ ನಿಸರ್ಗವು ಹಚ್ಚ ಹಸಿರಾಗಿ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿ, ಹೊಸತನಕ್ಕೆ ಸಾಕ್ಷಿ ಅನ್ನುವಂತೆ ನೂತನ ಕಳೆಯನ್ನು ಹೆಚ್ಚಿಸುತ್ತದೆ.
ಯುಗಾದಿಯ ದಿನದಂದು ತಮ್ಮ ತಮ್ಮ ಮನೆಯ ಒಳಗಡೆ ಸ್ವಚ್ಛಗೊಳಿಸಿ ಮನೆಯ ಅಂಗಳ ಗುಡಿಸಿ, ಸಗಣಿಯಲ್ಲಿ ಸಾರಿಸಿ, ರಂಗೋಲಿಗಳನ್ನ ಬಿಡಿಸಿ ಬಾಗಿಲುಗಳಿಗೆ ಹಸಿರು ಮಾವು ಬೇವುಗಳ ತಳಿರು ತೋರಣಗಳನ್ನು ಕಟ್ಟಿ, ಹೊಸ್ತಿಲುಗಳಿಗೆ ಅರಿಶಿನ ಕುಂಕುಮ ಹಾಗೂ ಹೂವಿನಿಂದ ಅಲಂಕಾರಗೊಳಿಸಿ, ಮನೆ ಮಂದಿ ಎಲ್ಲರೂ ಹರಳೆಣ್ಣೆಯನ್ನು ಮೈಕೈ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿ ದೇವರ ಮುಂದೆ ಹೊಸ ವರ್ಷದ ಪಂಚಾಂಗವನ್ನು ಇಟ್ಟು ಪೂಜೆ ಮಾಡಿ ಬೇವು ಬೆಲ್ಲ ಸವಿದು, ದೇವರಿಗೆ ಹಾಗೂ ದೊಡ್ಡವರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಸಾಮಾನ್ಯ ಪದ್ಧತಿ. ಯುಗಾದಿ ದಿನ ಹೋಳಿಗೆ ಸಮೇತ ಹಬ್ಬದ ಅಡುಗೆ ಮಾಡಿ ಮನೆ ಮಂದಿಯಲ್ಲಾ ಸೇರಿ ಒಟ್ಟಿಗೆ ಊಟಮಾಡುತ್ತಾರೆ. ಅಂದು ದೇವಸ್ಥಾನಗಳಿಗೆ ಭೇಟಿ ಕೊಟ್ಟು ‘ಪಂಚಾಂಗ ಶ್ರವಣ’ವನ್ನು ಕೇಳಿ ಮರಳಿ ಮನೆಗೆ ವಾಪಸ್ಸಾಗುತ್ತಾರೆ. ಬೇವು ಬೆಲ್ಲ ಸೇವಿಸುವುದರಿಂದ ಇಡೀ ವರ್ಷ ಪೂರ್ತಿ ನಮ್ಮ ಜೀವನದಲ್ಲಿ ಕಹಿ ಮತ್ತು ಸಿಹಿ ಎರಡು ಸಮನಾಗಿರಲಿ ಅನ್ನುವುದು ಹಿಂದೂಗಳ ಒಂದು ನಂಬಿಕೆ. ಈ ಪದ್ಧತಿ ತಲತಲಾಂತರದಿಂದ ಸಾಗಿ ಬರುತ್ತಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಸಮಾನತೆಯಿಂದ ಸಮಾಜದ ಎಲ್ಲರೊಂದಿಗೆ ಸಹಬಾಳ್ವೆ ನಡೆಸಿಕೊಂಡು ನಮ್ಮ ಆಚರಣೆಗಳನ್ನು ಗೌರವಿಸಿ, ಪ್ರೀತಿಸಿ (ಮೌಢ್ಯಗಳನ್ನು ಹೊರತು ಪಡಿಸಿ) ಕೈಬಿಡದೆ, ತಪ್ಪದೆ ಎಲ್ಲವನ್ನು ಪಾಲಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನಮ್ಮೊಂದಿಗಿರುವ ಅನ್ಯ ಧರ್ಮಗಳ ಆಚರಣೆ ಹಾಗೂ ಸಂಸ್ಕೃತಿಗಳನ್ನು ಗೌರವಿಸೋಣ.
ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿ ಪ್ರಚಲಿತ ಪೌರಾಣಿಕ ದಂತಕತೆಗಳು:
ಹಿಂದೂಗಳ ಹೊಸ ವರ್ಷದ ಆಚರಣೆಯು ಭಾರತದ ವಿವಿಧ ಭಾಗಗಳಲ್ಲಿ ಅನೇಕ ಪೌರಾಣಿಕ ದಂತ ಕತೆಗಳು ಜೇವಂತವಾಗಿದ್ದು, ಇವುಗಳ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಆಚರಿಸುವ ಪದ್ಧತಿ ಭಾರತದಲ್ಲಿವೆ.
ನಂಬಿಕೆ 1. ಬ್ರಹ್ಮದೇವನು ವಸಂತ ಋತುವಿನ ಚೈತ್ರಮಾಸದ ಶುಕ್ಲ ಪಾಡ್ಯಮಿಯ ದಿನ ಸೂರ್ಯೋದಯದ ಕಾಲಕ್ಕೆ ಸರಿಯಾಗಿ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿ, ಬ್ರಹ್ಮಾಂಡ ಸೃಷ್ಟಿಯ ನಂತರ ಕಾಲಗಣನೆಗಾಗಿ ಗ್ರಹ, ವಾರ, ನಕ್ಷತ್ರ, ಮಾಸ ಹಾಗೂ ಋತು ಇತ್ಯಾದಿಗಳನ್ನು ರಚಿಸಿ ಪಂಚಾಂಗವನ್ನು ಸಿದ್ಧಪಡಿಸಿ, ಜೀವರಾಶಿ, ಜಲರಾಶಿ, ಸಸ್ಯರಾಶಿ ಹಾಗೂ ಬೆಟ್ಟ ಗುಡ್ಡ ಮೊದಲಾದುವುಗಳನ್ನು ಸೃಷ್ಟಿಸಿದನೆಂದು ಪುರಾಣಗಳು ತಿಳಿಸುತ್ತದೆ.
ನಂಬಿಕೆ 2. ಶ್ರೀರಾಮಚಂದ್ರನು ರಾವಣನನ್ನು ಲಂಕೆಯಲ್ಲಿ ಹತ್ಯೆ ಮಾಡಿ, ಅಯೋಧ್ಯೆಗೆ ಹಿಂತಿರುಗಿ ಬಂದು ಶ್ರೀರಾಮನ ಪಟ್ಟಾಭಿಷೇಕವಾದದ್ದು ಚೈತ್ರ ಶುದ್ಧ ಪಾಡ್ಯಮಿಯ ದಿನ ಎಂಬುದು ಹಿಂದೂಗಳ ನಂಬಿಕೆಯಾಗಿದೆ.
ನಂಬಿಕೆ 3. ಬ್ರಹ್ಮ ದೇವನು ರಚಿಸಿದ್ದ ನಾಲ್ಕು ವೇದಗಳನ್ನು ಸೋಮಕಾಸುರ ಎಂಬ ರಾಕ್ಷಸನು ಕದ್ದು, ಆ ರಾಕ್ಷಸ ಸಮುದ್ರದ ತಳ ಭಾಗದಲ್ಲಿ ಅಡಗಿಕೊಂಡಿರುತ್ತಾನೆ. ಮಹಾವಿಷ್ಣು ಇದನ್ನು ಅರಿತು ಮತ್ಸ್ಯಾವತಾರವನ್ನು ತಾಳಿ ಸಮುದ್ರದ ಆಳಕ್ಕೆ ಪ್ರವೇಶ ಮಾಡಿ ಆ ರಾಕ್ಷಸನನ್ನು ಕೊಂದು ಅವನು ಕದ್ದಿದ್ದ ಆ ನಾಲ್ಕು ವೇದಗಳನ್ನು ಬ್ರಹ್ಮದೇವನಿಗೆ ಹಿಂತಿರುಗಿಸಿ ಕೊಟ್ಟನು ಎಂದು ಪುರಾಣಗಳು ತಿಳಿಸುತ್ತದೆ.
ನಂಬಿಕೆ 4. ಭಾರತೀಯ ಗಣಿತ ಶಾಸ್ತ್ರಜ್ಞ ಭಾಸ್ಕರಾಚಾರ್ಯನ ಖಗೋಳ ಶಾಸ್ತ್ರದ ಅನುಸಾರವಾಗಿ ಚೈತ್ರ ಮಾಸದ ಶುಕ್ಲ ಪಾಡ್ಯಮಿಯ ದಿನ ಶ್ರೀ ಕೃಷ್ಣನು ಕಲಿಯುಗದ ಆರಂಭದ ಮೊದಲ ದಿನದ ನಿರ್ಣಯವನ್ನು ಪ್ರಾರಂಭಿಸದನೆಂದು ಈ ದಿನದಂದು ಬ್ರಹ್ಮದೇವನು ಬ್ರಹ್ಮಾಂಡವನ್ನು ಸೃಷ್ಟಿಮಾಡಿದನೆಂದು ಹಿಂದೂಗಳು ನಂಬಿದ್ದಾರೆ.
ಹೀಗೆ ಹಿಂದೂಗಳು ಹೊಸ ವರ್ಷದ ಯುಗಾದಿ ಆಚರಣೆಯ ಹಿನ್ನೆಲೆಯಲ್ಲಿ ಈ ಮೇಲಿನ ಪೌರಾಣಿಕ ಹಿನ್ನೆಲೆಯ ದಂತಕತೆಗಳು ಹೆಚ್ಚು ಪ್ರಚಲಿತದಲ್ಲಿವೆ. ಇಷ್ಟೇ ಅಲ್ಲದೆ ಇನ್ನು ಹಲವು ದಂತ ಕತೆಗಳು ಇರಬಹುದು.
ಯುಗಾದಿಯ ಆಚರಣೆಯ ಹಿನ್ನೆಲೆಯಲ್ಲಿ ವೈಜ್ಞಾನಿಕ ವಿಚಾರಗಳು:
ಹಿಂದೂಗಳ ಯುಗಾದಿ ಒಂದು ಧಾರ್ಮಿಕ ಆಚರಣೆಯ ಹಬ್ಬವಾಗಿದ್ದು; ಇದರ ಜೊತೆಯಲ್ಲಿಯೇ ಕೆಲವು ವೈಜ್ಞಾನಿಕ ಅಂಶಗಳು ಯುಗಾದಿಯಲ್ಲಿ ಬೆಸೆದುಕೊಂಡಿರುವುದು ಕೂಡ ಅಷ್ಟೇ ಸತ್ಯ.
ವೈಜ್ಞಾನಿಕ ವಿಚಾರ 1: ಹಿಂದೂಗಳ ಹೊಸ ವರ್ಷದ ಯುಗಾದಿಯ ದಿನ ಪಂಚಾಂಗ ಬದಲಾವಣೆ ಆಗುವುದರ ಜೊತೆಗೆ ನಿಸರ್ಗದಲ್ಲಿ ಸಾಕಷ್ಟು ಬದಲಾವಣೆಗಳಾಗುವುದು. ಯುಗಾದಿಯ ದಿನದಂದು ಭೂಮಿಯ ಅಕ್ಷ (ಅರ್ಥ್ ಆಕ್ಸಿಸ್) ಸ್ವಲ್ಪ ಮಟ್ಟಿಗೆ ಬಾಗಿ ಉತ್ತರ ಗೋಳಾರ್ಧದಲ್ಲಿ ಇಲ್ಲಿಯವರೆಗೆ ಇದ್ದ ಶಿಶಿರ ಋತುವಿನ ಮಾಘ- ಫಾಲ್ಗುಣ ಮಾಸದಲ್ಲಿದ್ದ ತೀವ್ರವಾದ ಚಳಿ ಕಡಿಮೆಯಾಗಿ ವಸಂತ ಋತುವಿನ ಚೈತ್ರ- ವೈಶಾಖದ ಬೇಸಿಗೆಯ ಬಿಸಿಯ ಬೇಗೆ ಹೆಚ್ಚಾಗುವುದನ್ನು ಕಾಣಬಹುದು. ಹಾಗೆಯೇ ಶಿಶಿರ ಋತುವಿನ ಚಳಿಗೆ ಮರ ಗಿಡಗಳಲ್ಲಿ ಉದುರಿದ್ದ ಮರಗಿಡಗಳ ಎಲೆಗಳು ಹಚ್ಚ ಹಸುರಾಗಿ ವಸಂತ ಋತುವಿನ ಚೈತ್ರ ಮಾಸದ ಆರಂಭದ ವೇಳೆಗೆ ನಿಸರ್ಗದಲ್ಲಿ ಹೊಸತನವನ್ನು ಕಾಣಬಹುದು. ಅಷ್ಟೇ ಅಲ್ಲದೆ ಖಗೋಳ ಶಾಸ್ತ್ರದ ಲೆಕ್ಕಾಚಾರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಯುಗಾದಿಯ ಹಿಂದಿನ ದಿನ ಅಮಾವಾಸ್ಯೆ ಬಂದು ವಸಂತ ಋತುವಿನ ಆಗಮನದೊಂದಿಗೆ ಹೊಸವರ್ಷದ ಯುಗಾದಿ ಕಾಲಿಡುವುದು ಇಂದಿಗೂ ಕಾಣಬಹುದು.
ವೈಜ್ಞಾನಿಕ ವಿಚಾರ 2: ಶ್ರೇಷ್ಠ ಗಣಿತ ಶಾಸ್ತ್ರಜ್ಞ ಭಾಸ್ಕರಾಚಾರ್ಯನ ಪ್ರಕಾರ ವೈಜ್ಞಾನಿಕ ಹಾಗೂ ಖಗೋಳ ಶಾಸ್ತ್ರದ ನಿಯಮಗಳಿಗೆ ಹಿಂದೂ ಪಂಚಾಂಗ ಬದ್ಧವಾಗಿರುವ ಅಂಶವನ್ನು ಸ್ಪಷ್ಟಪಡಿಸುತ್ತಾನೆ. ವಿಶೇಷವಾಗಿ ಭೂಮಿ ಹಾಗೂ ಹಲವು ಗ್ರಹಗಳ ಚಲನೆಗಳ ಕ್ಷಣವನ್ನು ತಿಳಿಸುವ ಸಮರ್ಪಕ ಸಾಧನವಾಗಿ ಪಂಚಾಂಗ ರೂಪುಗೊಂಡಿರುವುದು ವಿಶೇಷ. ಯುಗಾದಿಯು ಸೂರ್ಯೋದಯದಿಂದ ಪ್ರಾರಂಭವಾಗಿ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ತಿರುಗುವಿಕೆಯು ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಯವರೆಗೆ ಪೂರ್ಣಗೊಂಡು ಹೊಸ ಯುಗಾದಿಯ ಸೂರ್ಯೋದಯ ಆರಂಭವಾಗುತ್ತದೆ. ಗ್ರಹಣಗಳ ದಿನವನ್ನು ಪಂಚಾಂಗ ನಿರ್ದಿಷ್ಟವಾಗಿ ತಿಳಿಸುವುದಲ್ಲದೆ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲದ ವೇಳೆಯ ನಿಖರತೆ ನೀಡುವುದು ನಿಜಕ್ಕೂ ಅತ್ಯದ್ಭುತ.
ವೈಜ್ಞಾನಿಕ ವಿಚಾರ 3: ಯುಗಾದಿಯ ಆಚರಣೆಯ ಸಂದರ್ಭದಲ್ಲಿ ಮುಖ್ಯವಾಗಿ ಐದು ವಿಶೇಷ ಅಂಶಗಳನ್ನು ಅನುಸರಿಸಿ ಯುಗಾದಿಯನ್ನು ಆಚರಿಸುತ್ತಾರೆ. ಈ ಐದು ಅಂಶಗಳು ಯುಗಾದಿಯ ವೈಜ್ಞಾನಿಕತೆಗೆ ಸಾಕ್ಷಿಯಾಗಿದೆ.
1. ಸ್ವಚ್ಛತೆ: ಸ್ವಚ್ಛತೆ ಎನ್ನುವುದು ಆರೋಗ್ಯದ ಪ್ರಮುಖ ಅಂಶ. ಯುಗಾದಿಯ ಹಬ್ಬದ ಹಿಂದಿನ ದಿನ ಹೆಣ್ಣುಮಕ್ಕಳು ಮನೆಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮನೆಯ ಒಳಗಡೆ ಹಾಗೂ ಹೊರಗಡೆ ಮನೆಯನ್ನು ಸ್ವಚ್ಛ ಗೊಳಿಸಿ, ಸುಂದರವಾದ ರಂಗೋಲಿಗಳನ್ನು ಬಿಡಿಸಿ ಅಲಂಕಾರಗೊಳಿಸುವುದರಿಂದ ಮನೆ ಅಂದವಾಗಿ ಶುದ್ಧಗೊಂಡು ಕ್ರಿಮಿಕೀಟಗಳು ಹಾಗೂ ಕೊಳೆಗಳಿಂದ ಮುಕ್ತವಾಗಿ ಮನೆಯ ವಾತಾವರಣ ಸ್ವಚ್ಛಗೊಳ್ಳುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ತನ್ಮೂಲಕ ಮಾನಸಿಕವಾಗಿ ಮನುಷ್ಯನ ಆರೋಗ್ಯ ವೃದ್ಧಿಯಾಗುವುದರಲ್ಲಿ ವೈಜ್ಞಾನಿಕ ಅಂಶವನ್ನು ಕಾಣಬಹುದು.
2. ಅಭ್ಯಂಜನ ಸ್ನಾನ: ಅಭ್ಯಂಜನ ಸ್ನಾನ ಯುಗಾದಿಯ ಮತ್ತೊಂದು ವಿಶೇಷವಾದ ಅವಿಭಾಜ್ಯ ಭಾಗ. ಅಭ್ಯಂಜನ ಸ್ನಾನ ದೇಹದಲ್ಲಿ ಉಲ್ಬಣಗೊಂಡ ವಾತ ದೋಷ ನಿವಾರಣೆಯಾಗುವುದರ ಜೊತೆಗೆ ದೇಹದ ಚರ್ಮ ಹಾಗೂ ಕೂದಲು ಕಾಂತಿಯುತವಾಗಿರಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಆಯುರ್ವೇದ ವಿಜ್ಞಾನದಲ್ಲಿ ಸಾಬೀತಾಗಿದೆ.
3. ಮಾವು ಬೇವು ತೋರಣ ಹಾಗೂ ಬೇವು ಬೆಲ್ಲದ ಮಹತ್ವ: ಹಬ್ಬ ಹಾಗೂ ಶುಭಕಾರ್ಯಗಳಿಗೆ ಮಾವಿನ ತೋರಣಕ್ಕೆ ಹೆಚ್ಚಿನ ಮಹತ್ವದ ಸ್ಥಾನವಿದೆ. ಯುಗಾದಿ ಬೇಸಿಗೆಯಲ್ಲಿ ಬರುವ ಹಬ್ಬವಾಗಿದ್ದು, ಬಿಸಿಲು ಹೆಚ್ಚು ಪ್ರಖರವಾಗಿರುತ್ತದೆ. ಈ ಬಿಸಿಲಿನ ಬೇಗೆಯಿಂದ ಮನೆಯನ್ನು ತಂಪಾಗಿರಿಸಲು ಮಾವು- ಬೇವಿನ ತೋರಣ ಸಾಕಷ್ಟು ಸಹಕಾರಿಯಾಗಿತ್ತದೆ. ತಾಜಾ ಮಾವು ಹಾಗೂ ಬೇವಿನ ಎಲೆಯ ತೋರಣದ ಮೂಲಕ ಗಾಳಿ ಪ್ರವೇಶಿಸಿದಾಗ ಮನೆಯ ಒಳಭಾಗ ತುಂಬಾ ತಂಪಾಗಿರಲು ಇದು ಸಹಕಾರಿಯಾಗುತ್ತದೆ. ಇದರ ತಂಪು ಗಾಳಿ ದೇಹಕ್ಕೆ ಹಾಗೂ ಮನಸ್ಸಿಗೆ ಬೇಸಿಗೆಯಲ್ಲಿ ತಂಪಾದ ಅನುಭವ ನೀಡಿ ದೇಹಕ್ಕೆ ಹಾಗೂ ಮನಸ್ಸಿಗೆ ಮುದ ನೀಡುತ್ತದೆ. ಯುಗಾದಿಯ ವೇಳೆಗೆ ಋತು ಬದಲಾವಣೆ ಆಗುವುದರಿಂದ ಶೀತ ಕೆಮ್ಮು ಹಾಗೂ ನೆಗಡಿ ಜ್ವರ ಬರುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕೆ ಬೇವಿನಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ಬೇವು ತೋರಣದೊಂದಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಹಾಗೆಯೇ ಯುಗಾದಿ ಪೂಜೆಯ ತೀರ್ಥ ಪ್ರಸಾದಗಳ ನಂತರ ಊಟಕ್ಕೆ ಮೊದಲು ಬೇವು-ಬೆಲ್ಲ ಸೇವನೆ ಹೆಚ್ಚು ಪ್ರಯೋಜನಕಾರಿ. ಬೆಲ್ಲದಲ್ಲಿ ಅನೇಕ ಜೀವಸತ್ವ ಗುಣಗಳಿದ್ದು ಇದರೊಂದಿಗೆ ಬೇವು ದೇಹಕ್ಕೆ ಸೇರಿದಾಗ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಾದೀತು. ಬೇವಿನಲ್ಲಿ ಆಂಟಿ ಇಂಪ್ಲಮೇಟರಿ, ರೋಗ ನಿರೋಧಕ ಹಾಗೂ ಆಂಟಿ ಬ್ಯಾಕ್ಟೀರಿಯಾ ಗುಣವುಳ್ಳದ್ದು ಎಂಬುದು ಆಯುರ್ವೇದ ವಿಜ್ಞಾನ ಹೇಳುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ವೈಜ್ಞಾನಿಕವಾಗಿ ಪ್ರಮಾಣಿಕೃತವಾಗಿದೆ. ಈ ಬೇವು ಬೆಲ್ಲ ಸೇವಿಸುವುದಕ್ಕೆ ಮೊದಲು ಈ ದಿನ ಶ್ಲೋಕವನ್ನು ಹೇಳುತ್ತಾ ಬೇವುಬೆಲ್ಲ ಸೇವನೆ ಮಾಡುತ್ತಾರೆ. “ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕ ರಾಯಚI ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂII” (ನೂರು ವರ್ಷಗಳ ಆಯುಷ್ಯ, ಸಧೃಡ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.) ಈ ಶ್ಲೋಕ ವೈಜ್ಞಾನಿಕವಾಗಿ ಹೆಚ್ಚು ಮಹತ್ವಪೂರ್ಣವೆಂ ದೆನಿಸುತ್ತದೆ. ಬೇವು-ಬೆಲ್ಲ ಜೀವನದ ಕಹಿ-ಸಿಹಿಗಳೆರಡನ್ನು ನಮ್ಮ ಬದುಕು ಒಳಗೊಂಡಿರಬೇಕೆಂದು ನೆನಪಿಸಲು ಬೇವು ಬೆಲ್ಲಗಳ ಮಿಶ್ರಣ ತಿನ್ನುವ ನಂಬಿಕೆ ಹಿಂದೂಗಳಲ್ಲಿ ಈ ಸಂದೇಶ ಹೆಚ್ಚು ಮಹತ್ವ ಪೂರ್ಣದ್ದಾಗಿದೆ. ಬೆಲ್ಲ ಸುಖವನ್ನು ಸಂಕೇತಿಸಿದರೆ ಬೇವು ಕಷ್ಟವನ್ನು ಸಂಕೇತಿಸುತ್ತದೆ.
4. ಹಬ್ಬದ ಊಟ ಹಾಗೂ ಹೊಸಬಟ್ಟೆ: ಯುಗಾದಿಯ ಹಬ್ಬದ ಊಟ ಅಂದರೆ ನೆನಪಾಗುವುದೇ ಬಾಳೆಎಲೆಯ ಒಬ್ಬಟ್ಟಿನ ಊಟ. ವಿವಿಧ ಬಗೆಯ ಖಾದ್ಯಗಳನ್ನು ಅಂದು ಊಟಕ್ಕೆ ಸಿದ್ಧಪಡಿಸಿ ಮನೆಮಂದಿಯೆಲ್ಲ ಒಟ್ಟಿಗೆ ಸೇರಿ ಸಡಗರ ಸಂಭ್ರಮದಲ್ಲಿ ಊಟಮಾಡುವುದರಿಂದ ಮನಸ್ಸಿಗೆ ಸಿಗುವ ಆ ಉಲ್ಲಾಸ, ಶಾಂತಿ ಹಾಗೂ ಸಮಾಧಾನದ ಊಟ ಮನಸ್ಸಿಗೆ ಹೆಚ್ಚು ಹಿತವೆನಿಸುತ್ತದೆ. ಇಂತಹ ಊಟವು ಒಂದು ಆರೋಗ್ಯದ ಭಾಗ್ಯವೇ ಸರಿ. ಹೊಸಬಟ್ಟೆ ಧರಿಸುವುದು ಸಹಾ ಮನಸ್ಸಿಗೆ ಒಂದು ಬಗೆಯ ಉಲ್ಲಾಸ.
5. ಹೊಸ ವರ್ಷದ ತೊಡಕು: ಯುಗಾದಿಯ ಮಾರನೆಯ ದಿನ ಬಿದಿಗೆಯ ದಿನವಾಗಿದೆ. ಇದನ್ನ ‘ವರ್ಷದ ತೊಡಕು’ ಎಂದು ಆಚರಿಸುತ್ತಾರೆ. ‘ಸತ್ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ದಿನ ಇದಾಗಿದ್ದು, ವರ್ಷವಿಡೀ ಸುಖ ನೀಡುವಂತೆ ಹಾಗೂ ಕಷ್ಟ ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ದಿನವೇ ‘ವರ್ಷದ ಹೊಸ ತೊಡಕು’. ಅಂದು ದೇವರನ್ನು ಪ್ರಾರ್ಥಿಸಿ ಅವನಿಂದ ಏನು ಪ್ರಾಪ್ತವಾಗುತ್ತದೆಯೋ ಅದು ಇಡೀ ವರ್ಷಕ್ಕೆ ಪ್ರಾಪ್ತಿಯಾಗುತ್ತದೆ ಅನ್ನುವ ನಂಬಿಕೆ ಈ ದಿನದ ವಿಶೇಷ. ಸಂಜೆಯ ವೇಳೆಗೆ ಚಂದ್ರನ ದರ್ಶನ ಮಾಡುವುದು ಅಂದಿನ ಇನ್ನೊಂದು ಆಕರ್ಷಣೆಯಾಗಿರುತ್ತದೆ.
ಹೀಗೆ ಹಿಂದೂಗಳ ಬದುಕಿನಲ್ಲಿ ಯುಗಾದಿ ಹಬ್ಬದ ಆಚರಣೆ ಧಾರ್ಮಿಕ ಹಾಗೂ ವೈಜ್ಞಾನಿಕ ಆಚರಣೆಯ ಹಬ್ಬವಾಗಿದೆ.
ವಂದನೆಗಳು. ಕನ್ನಡ ಕೂಟ ಲಕ್ಸೆಂಬರ್ಗ್
(ಲೇಖಕರು: ಶಿವಮೂರ್ತಿ ಎಲ್. ಎಸ್.