ಪುಟ್ಟ ದೇಶದಲ್ಲೊಂದು ಮನೆಯಮಾಡಿ

ಕೆಲಸ ನಿಮಿತ್ತ ಬ್ರಸೆಲ್ಸ್ ಗೆ 1982 ರಲ್ಲಿ ಬಂದಾಗ ಲಕ್ಸೆಂಬರ್ಗ್ ಹೆಸರು ನಾನು ಕೇಳಿರಲಿಲ್ಲ. ಅದಿರಲಿ, ನನ್ನ ಜೀವನದ ಬಹುಭಾಗ ಈ ಪುಟ್ಟ ದೇಶದಲ್ಲರಳುತ್ತದೆಂದು ಕನಸಿನಲ್ಲೂ ಭಾವಿಸಿರಲಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಲಕ್ಸೆಂಬರ್ಗ್ ಬಗ್ಗೆ ಪುಸ್ತಕ ಓದಿದ ನೆನಪು. ಮುಂದೇನು ಎಂಬ ಪ್ರಶ್ನೆ ಕಾಡಿದಾಗ ಆಸರೆ ಆಗಿದ್ದು ಲಕ್ಸೆಂಬರ್ಗ್ ನ ”ಸ್ಟಾರ್ ಓಫ್ ಏಷ್ಯಾ” ಹೋಟೆಲ್ ಮಾಲೀಕ ಅಲಿ. ಅವರಿತ್ತ ಆಮಂತ್ರಣವ ತಕ್ಷಣ ಒಪ್ಪಿ, ಎರಡೇ ವಾರಗಳ್ಲಲಿ ಲಕ್ಸೆಂಬರ್ಗ್ ನಿವಾಸಿ ಆಗಿಬಿಟ್ಟೆ. ಹೀಗೆ 1984 ನಲ್ಲಿ ಶುರುವಾದ ಈ ಪಯಣಕ್ಕೀಗ ಸುಮಾರು ನಾಲ್ಕು ದಶಕಗಳ ಸಂಭ್ರಮ. 

ಮೆಲಕು ಹಾಕಿದಾಗ ಬಹಳಷ್ಟು ಘಟನೆಗಳು ಕನಸೇನೂ ಅನಿಸುತ್ತದೆ. 1986 ರಲ್ಲಿ ಭಾರತಕ್ಕೆ ಕೇವಲ ಎರಡು ವಾರಗಳಿಗಾಗಿ ಹೋಗಿದ್ದೆ. ಉದ್ದೇಶ ಸ್ಪಷ್ಟವಾಗಿತ್ತು – ಸಂಸಾರ ಪ್ರಾರಂಭಿಸುವದು! ವಿದೇಶದಲ್ಲಿ ಕೆಲಸ ಮಾಡುವ ಹುಡುಗ ಎಂದೋ ಏನೋ, ಹಲವಾರು ಸಂಬಂಧಗಳು ಅರಸಿ ಬಂದಿದ್ದವು. ಅವರಲ್ಲಿ ಮನ, ಮನೆ ಬೆಳಗುವವಳನ್ನು ಹುಡುಕುವದು ಕಷ್ಟವಾದರೂ ವಿಳಂಬವಾಗಲಿಲ್ಲ. ಕೇವಲ ಒಂದೇ ತಿಂಗಳಿನಲ್ಲಿ ಸಂಬಂಧ ಹುಡುಕಿ, ಒಪ್ಪಿ ಮದುವೆ ಮುಗಿಸಿದ್ದಲ್ಲದೆ ಮನೆಯವಳಿಗೆ ಪಾಸ್ಪೋರ್ಟ್, ವೀಸಾ ಕೆಲಸ ಸಹ ಸಲೀಸಾಗಿ ಮುಗಿದಿತ್ತು. ನನ್ನವಳು ಈಗಲೂ ಇದನ್ನು ನೆನಸಿ ಆಶ್ಚರ್ಯ ಪಡುತ್ತಾಳೆ.

1991 ರಲ್ಲಿ ನಾವಿಬ್ಬರೂ ಸೇರಿ ಎಶ್ ( Esch) ನಲ್ಲಿ ನಮ್ಮದೇ ಆದ ‘ನಮಸ್ಕಾರ’ ರೆಸ್ಟೋರೆಂಟ್ ಪ್ರಾರಂಭಿಸಿದೆವು. ಆ ಸಮಯದಲ್ಲಿ ಲಕ್ಸೆಂಬರ್ಗ್ ನಲ್ಲಿ ಭಾರತೀಯರು ತುಂಬಾ ವಿರಳ. ಕನ್ನಡದವರಂತೂ ಕೇಳಲೇಬೇಡಿ. ಯಾರಾದರೂ ಭಾರತೀಯರು ರೆಸ್ಟೋರೆಂಟ್ ಗೆ ಬಂದರೆ ತುಂಬಾ ಸಂತೋಷವಾಗುತ್ತಿತ್ತು. ಬಹುತೇಕ ಗ್ರಾಹಕರು ಸ್ಥಳೀಯರೆ ಇರುತ್ತಿದ್ದರು. ದೇಶದ ಆಗಿನ ಮೂರು ಲಕ್ಷಕ್ಕೆ ಸ್ವಲ್ಪ ಮಿಕ್ಕಿದ್ದ ಜನಸಂಖ್ಯೆಯಲ್ಲಿ ಭಾರತೀಯರು ಬೆರಳೆಣಿಕೆಯಷ್ಟೆ. ಇಂದಿನ ಹಾಗೆ ಷನ್ಗೆನ್   (Schengen) ವೀಸಾ ಪದ್ಧತಿ ಇರದ ಕಾರಣ ಜರ್ಮನಿ, ಫ್ರಾನ್ಸ್ ದೇಶಗಳಿಗೆ ಹೋಗುವದು ಬಹು ಕಠಿಣದ ಮಾತು. ಕೇವಲ ಬೆಲ್ಜಿಯಂ ಹಾಗು  ಹಾಲಂಡ್  ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಿತ್ತು. ಇದರಿಂದಾಗಿ ರೆಸ್ಟೋರೆಂಟ್ ಗೆ ಅವಶ್ಯಕ ಸಾಮಗ್ರಿಗಳನ್ನು ಹೊಂದಿಸುವದು ಸ್ವಲ್ಪ ಕಷ್ಟದ ಕೆಲೆಸವಾಗಿತ್ತು. ಭಾರತದ ಪ್ರಯಾಣ ಕೂಡ ಸುಮಾರು ಎರಡು ದಿವಸಗಳ ಆಯಾಸದ ಕೆಲಸ.  ಆಗ ಲಕ್ಸೆಂಬರ್ಗ್ ಭಾಷೆಗೆ ಲಿಪಿ ಇರಲಿಲ್ಲ. ಅದು ಬಂದಿದ್ದು ಇಪ್ಪತ್ತು ವರ್ಷಗಳೀಚೆಗೆ. ಹಾಗಾಗಿ ಫ್ರೆಂಚ್ ಭಾಷೆಯೇ ಎಲ್ಲೆಲ್ಲೂ ಎಲ್ಲರು ಬಳಸುತ್ತಿದ್ದರು. ಜೊತೆಗೆ ಇಂಗ್ಲಿಷ್ ಬಳಕೆ ಕೂಡ ಸಾಕಷ್ಟಿತ್ತು. ನಿಧಾನವಾದರೂ ಈಗ ಫ್ರೆಂಚ್ ಕಲಿತಿದ್ದೇನೆ. 

ಸಂಸಾರ ಹಾಗು ವ್ಯವಹಾರದ ಮಧ್ಯೆ ಸಮಯ ಸದ್ದಿಲ್ಲದೇ ಜಾರಿತ್ತು. ಬೇರೆಡೆಗೆ ಕಣ್ಣು ಹಾಯಿಸಲೂ ಸಮಯವಿಲ್ಲದಂತೆ ನಮ್ಮಿಬ್ಬರ ಸಂಸಾರ ನೌಕೆ ಸಾಗಿತ್ತು. ಈಗ ನೋಡಿದರೆ ಅದು ಸಾರ್ಥಕ ಎನಿಸುತ್ತದೆ. ಮಗ ಹಾಗು ಮಗಳು ಬೆಳೆದು ಅವರವರ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ಅರವರಿಬ್ಬರಿಗೂ ಕನ್ನಡವೇ ಮಾತೃಭಾಷೆ. ಆಗಾಗ ಭಾರತಕ್ಕೂ ಭೇಟಿ ನೀಡಿ ಸಂಭ್ರಿಮಿಸುತ್ತಾರೆ.  

ನನ್ನದೀಗ ವಿಶ್ರಾಂತ ಜೀವನ. ರೆಸ್ಟೋರೆಂಟ್ ಜೊತೆಗಿನ ಸಂಬಂಧ 2009 ರಲ್ಲಿ ಕೊನೆಗೊಳಿಸಿದೆವು. ಈಗ ಬಹಳಷ್ಟು ಸಮಯ ತಾಯ್ನಾಡಿನಲ್ಲಿ ಕಳೆಯುತ್ತೇನೆ. ಜನ್ಮಭೂಮಿಗೂ, ಕರ್ಮಭೂಮಿಗೂ ನಾನು ಚಿರಋಣಿ. ಲಕ್ಸೆಂಬರ್ಗ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದೇಶ, ನಗರ ಬೆಳೆದಿದೆ. ಜೊತೆಗೆ ಭಾರತೀಯರ ಸಂಖ್ಯೆ ಕೂಡ. ಸಾಕಷ್ಟು ಕನ್ನಡಿಗರೂ ಇದ್ದಾರೆ.  ನೀವೆಲ್ಲ ಸೇರಿ ಕನ್ನಡ ಸಂಘ ಪ್ರಾರಂಭಿಸಿರುವದು ತುಂಬಾ ಸಂತೋಷದ ಸಂಗತಿ. ತಾಯ್ನಾಡಿನ ಸಂಸ್ಕ್ರತಿ, ಭಾಷೆ ಉಳಿಸಿ ಬೆಳೆಸುವ ಕೆಲಸ ಈ ಸಂಘದಿಂದ ಆಗಲಿ ಎಂದು ಆಶಿಸುತ್ತೇನೆ.

ಲೇಖಕರ ವಿವರಗಳು

(ಲೇಖಕರು: ಶ್ರೀ ವಿಠ್ಠಲ ಮೂರ್ತಿ, ಉದ್ಯಮಿಗಳು. ಯುರೋಪಿನಲ್ಲಿ 40 ವರ್ಷಗಳಿಂದ,  ಲಕ್ಸೆಂಬರ್ಗ್ ನಲ್ಲಿ 36  ವರ್ಷಗಳಿಂದ ವಾಸಿಸುತ್ತಿದ್ದಾರೆ)